ಕಾಯೋದು ಬಿಟ್ಟು ಬೇರೆ ದಾರಿ ಇದೆಯೇ?

ದಿನಪತ್ರಿಕೆ ಮತ್ತು ದೋಸೆ – ಬಿಸಿಯಿರುವಾಗಲೇ ಚೆನ್ನ. ಬೆಳಿಗ್ಗೆ ಆರಕ್ಕೆ ಬರುವ ಪೇಪರನ್ನು ಸಂಜೆ ಆರರ ಹೊತ್ತಿಗಾದರೂ ಓದಿಯಾಗಿರಬೇಕು.

ನ್ಯೋಸ್ ಪೇಪರ್ ಓದುವುದು ಬಾಲ್ಯದಿಂದ ಅಂಟಿಕೊಂಡಿರುವ ಅಭ್ಯಾಸ. ಮೊದಲು ಪ್ರಜಾವಾಣಿ, ನಂತರ ವಿಜಯಕರ್ನಾಟಕ , ಆಮೇಲೆ ಕನ್ನಡಪ್ರಭ..ಈಗ ಕೆಲವು ವಾರಗಳಿಂದ ವಿಜಯವಾಣಿ. ಎರಡೂವರೆ ದಶಕಗಳಲ್ಲಿ ಅಭಿರುಚಿಗಳು ಬದಲಾಗಿವೆ.. ಅಂದು ಮಕ್ಕಳ ಪುಟದ ಬಣ್ಣದ ಚಿತ್ರಗಳಿಂದ ಆರಂಭವಾಗುತ್ತಿದ್ದ ಓದು, ಈಗ ಮೊದಲನೇ ಪುಟದ ಮುಖ್ಯಸುದ್ದಿಯೊಂದಿಗೆ!

ಆದರೆ ಕಳೆದ ಒಂದೂವರೆ ತಿಂಗಳಿನಿಂದ ಪೇಪರ್ ಓದಿದ್ದೇ ಇಲ್ಲ! ಎಲ್ಲೋ ಆಗೊಮ್ಮೆ ಈಗೊಮ್ಮೆ ಪುಟ ತಿರುವಿದ್ದು ಮಾತ್ರ. ಓದಿದ್ದು ಚಕ್ರವರ್ತಿಯವರ ಅಂಕಣ ಒಂದೇ!

ಏನೋ ಕಳೆದುಕೊಂಡಂತೆ! ಸುದ್ದಿಗಳು ತಿಳಿಯೋಕೆ ಈಗ ದಿನಪತ್ರಿಕೆಗಳು ಬೇಕಾಗಿಲ್ಲ. ಟಿವಿಯೋ, ಟ್ವಿಟರೋ ಅಥವಾ ಮುಖಪುಸ್ತಕವೋ ಇದೆಯಲ್ಲಾ! ಹಾಗಾದರೆ ಕಳೆದುಕೊಂಡಿದ್ದು ಏನು?

ತುಂಬಾ ಇಷ್ಟಪಟ್ಟು ಓದುತ್ತಿದ್ದ ವಿಶ್ವೇಶ್ವರ ಭಟ್ರ ಅಂಕಣಗಳನ್ನು!

ಪಾಯಸ ಅಂತ ಮಾಡಿ, ಅದಕ್ಕೆ ಬೆಲ್ಲವೇ ಹಾಕದಿದ್ರೆ?! ಬೆಲ್ಲವಿಲ್ಲದ ಪಾಯಸ ತಿನ್ನೋದು ಹೇಗೆ?

ವಿಶ್ವೇಶ್ವರ ಭಟ್ರ ಸುದ್ದಿಗಳಿಗೆ ಅಡಿಕ್ಟ್ ಆಗಿರೋ ಜನರ ದೊಡ್ಡ ಸಂಖ್ಯೆಯೇ ಇದೆ. ಅವರ ಸುದ್ದಿಗಳೇ ಹಾಗೆ.. ಓದಿದವರೆಗೆ ಓದಿನ ಗೀಳುಹಿಡಿಸುವಂತೆ.

ಸುದ್ದಿಮನೆಯ ಮಾತಿನಿಂದ ಶ್ವೇತಭವನದ ವರೆಗೆ..

ಸಾಹಿತ್ಯ ಕೃಷಿಯಿಂದ ಟೊಮ್ಯಾಟೋ ಕೃಷಿಯವರೆಗೆ..

ರಾಜಕೀಯದಿಂದ ರುವಾಂಡಾದ ಕಾಡಿನವರೆಗೆ..

ತಂತ್ರಜ್ಞಾನದಿಂದ ನೆಂಟರ ಮನೆಯ ಸೀಕರಣೆಯ ವರೆಗೆ..

ತತ್ವಜ್ಞಾನದ ಪಾಠದಿಂದ ನೆನೆದರೆ ನಗುತರಿಸುವ ಜೋಕಿನ ವರೆಗೆ..

ಅವರ ಬರಹದಲ್ಲಿ ಅದೆಷ್ಟು ವಿಷಯಗಳು! ವಿಶ್ವೇಶ್ವರ ಭಟ್ಟರು ಯಾವುದರ ಬಗ್ಗೆ ಬರೀತಾರೆ ಅನ್ನೋ ಪ್ರಶ್ನೆಗೆ ‘ಯಾವುದರ ಬಗ್ಗೆ ಬರೆಯೋದಿಲ್ಲ?’ ಎಂಬ ಪ್ರಶ್ನೆಯೇ ಉತ್ತರ.

ಅವರ ಜೀವನದಲ್ಲಿ ಎಷ್ಟೊಂದು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ ಎಂದು ಎನಿಸದೇ ಇರದು. ಆದರೆ ಅದು ಹಾಗಲ್ಲ. ಸ್ವಾರಸ್ಯಕರ ಘಟನೆಗಳು ನಮ್ಮ ಜೀವನದಲ್ಲೂ ನಡೆಯುತ್ತವೆ. ಆದರೆ ನಮಗೂ ಅವರಿಗೂ ಇರುವ ವ್ಯತ್ಯಾಸ – ಅವರು ಅದನ್ನು ಗಮನಿಸಿ ನಮಗೂ ತಲುಪಿಸುತ್ತಾರೆ.

ಓದಿದ ಪುಸ್ತಕದಿಂದೊಂದು ಸಾಲು…ಯಾವುದೋ ಎಸ್ಸೆಮ್ಮೆಸ್ಸು.., ಇನ್ಯಾವುದೋ ಟ್ವೀಟು..ಯಾರೋ ಹೇಳಿದ್ದು.. ಎಲ್ಲೋ ಕೇಳಿದ್ದು..ಇನ್ನೆಲ್ಲೋ ನೋಡಿದ್ದು..

ಈ ವ್ಯಕ್ತಿ ಯಾವುದನ್ನೂ ಬಿಡೋದಿಲ್ಲ!

ಪತ್ರಿಕೆ ಅಂದರೆ ಹೀಗೇ ಇರಬೇಕು ಅನ್ನೋ ಚೌಕಟ್ಟಿನ ಹೊರಗೆ ನಿಂತು ಯೋಚಿಸುವ ವಿಶ್ವೇಶ್ವರ ಭಟ್ರು ನನಗೆ ಇಷ್ಟ ಆಗೋದು ಇದೇ ಕಾರಣಕ್ಕೆ. ಕನ್ನಡ ಪತ್ರಿಕೋದ್ಯಮಕ್ಕೇ ಹೊಸ ಆಯಾಮ ಕೊಟ್ಟವರು ಇವರು.

ಅವರಿಂದ ಕಲಿಯಬೇಕಾದ್ದು ಎರಡು ಅಂಶಗಳು –

ಮೊದಲನೆಯದ್ದು – ಬೇರೆ ಬೇರೆ ವಿಷಯಗಳ ಬಗ್ಗೆ ಇರುವ ಪುಸ್ತಕಗಳನ್ನು ಓದೋದು. ಮತ್ತು ಅದರಲ್ಲಿ ಮುಖ್ಯವೆನಿಸುವ ಅಥವಾ ಇಷ್ಟವಾದ ಅಂಶಗಳನ್ನು ಬರೆದಿಡುವುದು.

ಎರಡನೆಯದ್ದು – ದಿನನಿತ್ಯದ ಸಾಮಾನ್ಯವೆನಿಸುವ ಘಟನೆಗಳನ್ನೂ ಗಮನಿಸೋದು. ಮತ್ತು ಅದರಲ್ಲಿ ಹಾಸ್ಯವನ್ನೋ, ಪಾಠವನ್ನೋ ಹುಡುಕಿ ತೆಗೆಯುವುದು!

ಒಟ್ಟಾರೆ ವಿಶ್ವೇಶ್ವರ ಭಟ್ರ ಅಂಕಣಗಳನ್ನು ಮಿಸ್ಸಿಂಗೋ ಮಿಸ್ಸಿಂಗು!

‘ನೂರೆಂಟು’ ಅಂಕಣದ ಸಾವಿರಾರು ಸುದ್ದಿಗಳು ಮತ್ತೆ ಯಾವ ಹೊಸ ರೂಪದಲ್ಲಿ ಬರಲಿವೆಯೋ! ಕಾಯೋದು ಬಿಟ್ಟು ಬೇರೆ ದಾರಿ ಇದೆಯೇ?

ಏನಿದು ಚಿತ್ತ-ವೃತ್ತಿ?

ಚಿತ್ತ ಎಂದರೆ ಮನಸ್ಸು ಅನ್ನುವುದು ಎಲ್ಲರಿಗೂ ತಿಳಿದಿದೆ ಆದರೆ ಅಷ್ತೇ ಅಲ್ಲ, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳು ಒಟ್ಟಾಗಿ ಅಂತಃಕರಣ ಎಂಬುದಾಗಿ ಕರೆಯಲ್ಪಡುತ್ತವೆ. ಇಂದ್ರಿಯಗಳ ಮೂಲಕ ಮನಸ್ಸು ತಿಳಿಯುವ ವಿಷಯಗಳನ್ನು ಬುದ್ಧಿಯ ಅವಗಾಹನೆಗೆ ತಂದು ಆ ಮೂಲಕ ಪ್ರತಿಕ್ರಿಯೆಯೊಂದು ಮೂಡುವಾಗ ಅಹಂಕಾರದ ಉಪಸ್ಥಿತಿಯು ತೋರಿಸಲ್ಪಡುತ್ತದೆ. ಈ ಪ್ರಕ್ರಿಯೆಯೇ ಚಿತ್ತ.

ಇವುಗಳ ಹಿಂದೆ ಅಡಗಿರುವುದೇ ಆತ್ಮ. ಅಷ್ಟು ಸುಲಭವೇ ಆತ್ಮದ ದರ್ಶನ?! ಖಂಡಿತಾ ಇಲ್ಲ.

ಚಿತ್ತದಲ್ಲಿ ಮೂಡುವ ವೃತ್ತಿಗಳು ಅಷ್ಟು ಸುಲಭವಾಗಿ ಆತ್ಮವನ್ನು ಕಾಣಲು ಬಿಡುವುದೇ ಇಲ್ಲ. ಆದ್ದರಿಂದರಿಂದಲೇ ಅಲ್ಲವೇ ಆತ್ಮ ಸಾಕ್ಷಾತ್ಕಾರಕ್ಕೆ ಅದೆಷ್ಟೋ ಸಾಧನೆ ಮಾಡಬೇಕಾಗುವುದು. ವೃತ್ತಿ ಅಷ್ಟು ಶಕ್ತಿಶಾಲಿಯೇ? ಏನದು? ಸಾಗರದಲ್ಲಿನ ಅಸಂಖ್ಯ ಅಲೆಗಳಂತೆಯೇ ಚಿತ್ತದಲ್ಲಿ ಮೂಡುವ ಆಲೋಚನೆಗಳೇ ವೃತ್ತಿಗಳು. ಚಿತ್ತವೃತ್ತಿಗಳು.

ನಮ್ಮ ಪ್ರತಿಯೊಂದೂ ಯೋಚನೆಗಳು, ತೊಳಲಾಟಗಳು, ಭಾವನೆಗಳು, ನೋವು ನಲಿವುಗಳು ಎಲ್ಲವೂ ಚಿತ್ತದ ವೃತ್ತಿಗಳೇ.

ಚಿತ್ತ ವೃತ್ತಿ ಎಂಬ ಹೆಸರಿನಡಿಯಲ್ಲಿ ಬರೆಯಲು ಬಯಸಿದ್ದೂ ಅದೇ ಕಾರಣಕ್ಕೆ. ಕಂಡದ್ದು, ಕೇಳಿದ್ದು, ನೋಡಿದ್ದು, ನೆನಪಿನಿಂದ ಹೆಕ್ಕಿ ತಂದಿದ್ದು, ಯೋಚಿಸಿದ್ದು, ಅನುಭವಿಸಿದ್ದು, ಕಲ್ಪಿಸಿದ್ದು ಎಲ್ಲವೂ ಇದೇ ಗುಂಪಿನವೇ! ಅವುಗಳನ್ನೇ ಅಲ್ಲವೇ ಅಕ್ಷರ ರೂಪ ಕೊಟ್ಟು ಲೇಖನ, ಕವನ ಅಥವಾ ಕಥೆ ಎಂದು ಕರೆಯುವುದು?

ಈ ಎಲ್ಲ ಚಿತ್ತವೃತ್ತಿಗಳನ್ನು ದಾಟಿ ಆತ್ಮದ ನಿಜರೂಪ ತಿಳಿಯುವುದು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಈ ಎಲ್ಲ ಚಿತ್ತವೃತ್ತಿಗಳನ್ನೂ ಶಾಂತಗೊಳಿಸಬೇಕು. ಸರೋವರದ ಅಲೆಗಳು ನಿಂತಾಗ ಮಾತ್ರ ತಳ ಕಾಣಲು ಸಾಧ್ಯ. ಹೇಗೆ? ಅದಕ್ಕೂ ಉಪಾಯವಿದೆ. ಮಹರ್ಷಿ ಪತಂಜಲಿ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ ‘ಯೋಗಃ ಚಿತ್ತವೃತ್ತಿನಿರೋಧಃ’ ಎಂದು. ಇದು ಯೋಗ ಪಾಠದ ಮೊದಲ ಸೂತ್ರ. ಚಿತ್ತದ ವೃತ್ತಿಗಳನ್ನು ತಡೆಗಟ್ಟುವುದೇ ಯೋಗ. ಅದೆಷ್ಟು ಸುಲಭ!

ಆದರೆ ಯೋಗವೆಂದರೆ ಕೇವಲ ಆಸನ ಪ್ರಾಣಾಯಾಮಗಳಲ್ಲ! ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ…ಈ ಎಲ್ಲ ಹಂತಗಳನ್ನೂ ಒಂದೊಂದಾಗಿ ದಾಟಿದರೆ ಮಾತ್ರ ಚಿತ್ತವೃತ್ತಿಯಿಂದ ಮುಕ್ತಿ..ಹಾಗೂ ಆತ್ಮದ ಸಾಕ್ಷಾತ್ಕಾರ, ಮುಕ್ತಿ, ಮೋಕ್ಷ…

ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ.. ಇನ್ನೂ ಹಲವು ಮಾರ್ಗಗಳು ಇದೇ ಗುರಿಯನ್ನೇ ತಲುಪುತ್ತವೆ.

ಆ ಸಾಧನೆಯ ನಮ್ಮ ಪಯಣ ನಿರಂತರ. ಆದರೆ ನಡುನೀರಲ್ಲಿ ಅಲೆಗಳ ನಡುವೆ ತೋಯ್ದಾಡುತ್ತಾ ಕೊನೆಗಾಣದೆ, ತಳಗಾಣದೆ ಜೀವನದ ಅಂತ್ಯ ಕಾಣುವವರೇ ಹೆಚ್ಚು. ಜೀವನದಲ್ಲಿ ಅದಾವುದೋ ಸುಖ ನೆಮ್ಮದಿಗಳನ್ನು ಹುಡುಕುತ್ತ ಒದ್ದಾಡುವ ನಾವು ಜೀವನ ಪ್ರತಿಯೊಂದೂ ಹಂತದಲ್ಲಿ ಅದನ್ನು ಪಡೆಯುವ ಅವಕಾಶವಿದೆ ಎಂಬುದನ್ನೇ ಮರೆಯುತ್ತೇವೆ. ಜೀವನ ಹರಿಯುವ ನದಿ, ಸಾಗರ ಸೇರುವ ತವಕ ಇದ್ದೇ ಇದೆ, ಆದರೆ ನಡುವಿನ ದಾರಿಗೂ ಅರ್ಥವಿರಲಿ.

ನಮ್ಮ ಚಿತ್ತದ ವೃತ್ತಿಗಳು ಕೇವಲ ಯೋಚನೆಗಳಾಗಿ ಉಳಿಯದೇ ಚಿಂತನೆಗಳಾಗಲಿ. ಚಿಂತೆಗಳನ್ನು ಕಳೆಯುವ ಚಿಂತನೆಗಳಾಗಲಿ.